ಕದಳಿಯ ವನ : ಶ್ರೀಶೈಲದ ಪರ್ವತಾವಳಿಯಲ್ಲಿರುವ ಒಂದು ಜಾಗ. ಪ್ರಕೃತಿ ಸೌಂದರ್ಯಗಳಿಂದ ಕಂಗೊಳಿಸುತ್ತಿದ್ದು ತಪಸ್ವಿಗಳಿಗೆ ಅನುಕೂಲವಾದ ಗುಪ್ತಸ್ಥಳ. ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದಿಂದ ಹರಳಯ್ಯನ ಮಿಟ್ಟಿಯನ್ನು ಹಾದು ಚುಕ್ಕಲ ಪರ್ವತವನ್ನು ದಾಟಿ, ಕೃಷ್ಣಾನದಿಯನ್ನು ಅಡ್ಡಹಾಯ್ದು ಮುಂದೆ ಹೋದರೆ ಅಲ್ಲಿ ಮಹದೇವಿಯಕ್ಕನ ಗವಿ ಮತ್ತು ಕದಳಿ ವನಗಳು ಸಿಕ್ಕುತ್ತವೆ. ಕದಳಿಯ ವನವನ್ನು ಗುಪ್ತ ಕದಳಿ ಎಂದು ವಚನಕಾರರು ಕರೆದಿದ್ದಾರೆ. ಕದಳಿಯ ವನವನ್ನು ಸೇರುವುದು ಎಂದರೆ ಮೋಕ್ಷವನ್ನು ಪಡೆಯುವುದು ಎಂಬ ಅರ್ಥ ಇರುವಂತೆ ತೋರುತ್ತದೆ.             (ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ